ಮಾವು
ಭಾರತದ ಫಲಸಸ್ಯಗಳ ಪೈಕಿ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧವಾದ ಫಲವೃಕ್ಷ (ಮ್ಯಾಂಗೊ). ಪ್ರಪಂಚದ ಉತ್ಕøಷ್ಟ ಹಣ್ಣಿನ ಮರಗಳ ಸಾಲಿನಲ್ಲಿ ಇದಕ್ಕೆ ಪ್ರಮುಖ ಸ್ಥಾನವುಂಟು. ಗೋಡಂಬಿ, ಕರಿಗೇರು, ಅಮಟೆ ಮುಂತಾದ ಉಪಯುಕ್ತ ಸಸ್ಯಗಳನ್ನು ಒಳಗೊಂಡಿರುವ ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದೆ. ಮ್ಯಾಂಜಿಫೆರ ಇಂಡಿಕ ಇದರ ಸಸ್ಯಶಾಸ್ತ್ರೀಯ ಹೆಸರು.

	ಹಣ್ಣುಗಳ ರಾಜ ಎಂಬ ಬಿರುದನ್ನು ಹೊತ್ತಿರುವ ಮಾವು ಭಾರತದಲ್ಲಿ ಅತಿ ಹಿಂದಿನಿಂದ ಕೃಷಿಯಲ್ಲಿರುವ ಸಸ್ಯವಾಗಿದ್ದು ಭಾರತದ ಜನಜೀವನದಲ್ಲಿ, ಇತಿಹಾಸದಲ್ಲಿ ಬಲುಪ್ರಮುಖ ಸ್ಥಾನ ಪಡೆದಿದೆ. ಸುಮಾರು 4000 ವರ್ಷಗಳಿಂದಲೂ ಭಾರತದಲ್ಲಿ ಇದರ ಬೇಸಾಯ ಇದೆ ಎನ್ನಲಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮಾವು ಅಸ್ಸಾಮ್-ಬರ್ಮ-ಥಾಯ್ಲೆಂಡ್ ವಲಯದಲ್ಲಿ ಉಗಮಿಸಿತು. ಈ ದೇಶಗಳ ಕಾಡುಗಳಲ್ಲಿ ಇಂದು ಜನಪ್ರಿಯವಾಗಿರುವ ಇಂಡಿಕ ಪ್ರಭೇದದ ಹಾಗೂ ಸಿಲ್ವೇಟಿಕ ಪ್ರಭೇದದ ಕಾಡು ಪ್ರರೂಪಗಳು ಕಾಣದೊರೆಯುತ್ತಿದ್ದು ಮಾವು ಇವೆರಡು ಪ್ರಭೇದಗಳ ನಡುವೆ ಸಂಭವಿಸಿತೆನ್ನಲಾದ ಸಹಜ ಸಂಕರದಿಂದ ಹುಟ್ಟಿದ್ದು ಎಂಬ ಅಭಿಪ್ರಾಯ ಇದೆ.

	ಭಾರತಾದ್ಯಂತ, ಉಷ್ಣ ಹಾಗೂ ಉಪೋಷ್ಣ ವಲಯ ಬೆಟ್ಟಗಳ ಕಾಡುಗಳಲ್ಲಿ ಪ್ರಧಾನವಾಗಿ ಹಳ್ಳ ತೊರೆಗಳ ಸನಿಹದಲ್ಲಿ ಮಾವು ಕಾಡುಮರವಾಗಿ ಕಾಣದೊರೆಯುತ್ತದೆ. ಹಿಮಾಲಯ ಪರ್ವತ ಶ್ರೇಣಿಯ ತಪ್ಪಲು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳು, ಮಧ್ಯಪ್ರದೇಶ, ಬಿಹಾರ, ಒರಿಸ್ಸ, ಅಸ್ಸಾಮ್ ಮತ್ತು ಅಂಡಮಾನ್ ದ್ವೀಪಗಳ ಕಾಡುಗಳಲ್ಲೂ ಇದು ಸಾಮಾನ್ಯ. ಅಲ್ಲದೆ ಮಾವಿನ ಮರವನ್ನು ತೋಪುಗಳಲ್ಲೂ ಮನೆಯ ಹಿತ್ತಲಿನಲ್ಲೂ ಕೃಷಿ ಜಮೀನಿನ ಅಂಚುಗಳಲ್ಲೂ ರಸ್ತೆಯ ಬದಿಗಳಲ್ಲೂ ಬೆಳೆಸುವುದು ಎಲ್ಲರಿಗೂ ಗೊತ್ತಿದೆ.

	ಮಾವು ಭಾರತದ ಅತ್ಯಂತ ಮುಖ್ಯ ಫಲಸಸ್ಯವೆಂದು ಮೇಲೆ ಹೇಳಿದೆ. ಹಣ್ಣು ಕೊಡುವ ಸಸ್ಯಗಳ ಬೇಸಾಯದ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ 60ರಷ್ಟು ಭಾಗ ಮಾವಿನ ಕೃಷಿಗೆ ವಿನಿಯೋಗವಾಗಿದೆ. (ಒಟ್ಟು 2 ದಶಲಕ್ಷ ಎಕರೆ) ಇವುಗಳ ಪೈಕಿ ಉತ್ತರ ಪ್ರದೇಶ ಮೊದಲನೆಯದು (767,690 ಎಕರೆ). ಎರಡನೆಯ ಸ್ಥಾನ ಬಿಹಾರ ರಾಜ್ಯದ್ದು (217,517 ಎಕರೆ). ಮಾವಿನ ತೋಟಗಾರಿಕೆಗೆ ಹೆಸರಾಂತ ಉಳಿದ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಒರಿಸ್ಸ. ಕರ್ನಾಟಕವೂ ಸಾಕಷ್ಟು ಪ್ರಸಿದ್ಧವಾಗಿದೆ.

	ಪ್ರಪಂಚದ ಇನ್ನಿತರ ದೇಶಗಳಲ್ಲೂ ಮಾವಿನ ಬೇಸಾಯ ಉಂಟು. ದಕ್ಷಿಣ ಚೀನ, ಮಲಯ, ಫಿಲಿಪೀನ್ಸ್, ಹವಾಯಿ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯದ ಉಷ್ಣಪ್ರದೇಶಗಳು, ಮಡಗಾಸ್ಕರ್, ಆಫ್ರಿಕದ ಕರಾವಳಿ, ಉತ್ತರ ಅಮೆರಿಕದ ಫ್ಲಾರಿಡ ಮತ್ತು ಕ್ಯಾಲಿಫೋರ್ನಿಯ ರಾಜ್ಯಗಳಲ್ಲಿ ಮಾವನ್ನು ಕೃಷಿ ಮಾಡಲಾಗುತ್ತಿದೆ.

	ಮಾವು 10-45 ಮೀ ಎತ್ತರಕ್ಕೆ ಬೆಳೆಯುವ ದೊಡ್ಡ ಗಾತ್ರದ ಮರ. ಸಾಮಾನ್ಯವಾಗಿ ನೇರವಾಗಿ ದೃಢವಾಗಿ ಬೆಳೆಯುವಂಥ ಪ್ರಧಾನಕಾಂಡ, ಗುಮ್ಮಟದಾಕಾರದ ಚೆಲುವಾದ ಹಂದರ ಇದರ ಮುಖ್ಯ ಲಕ್ಷಣಗಳು. ಕಾಂಡ ಒರಟಾದ, ಮಂದವಾದ, ಕಡುಬೂದಿ ಬಣ್ಣದ ತೊಗಟೆಯಿಂದ ಆವೃತವಾಗಿದೆ. ಎಲೆಗಳು 10-30 ಸೆಂಮೀ ಉದ್ದ. 2-9 ಸೆಂಮೀ ಅಗಲ ಇರುವಂಥ ಈಟಿ ಮೊನೆಯಾಕಾರದವಾಗಿವೆ.

	ಎಲೆಗಳನ್ನು ಹೊಸಕಿದರೆ ವಿಶಿಷ್ಟವಾದ ವಾಸನೆ ಹೊರಬರುತ್ತದೆ. ಹೂಗಳು ಚಿಕ್ಕಗಾತ್ರದವು; ಸಹಸ್ರ ಸಂಖ್ಯೆಯಲ್ಲಿ ಪ್ಯಾನಿಕಲ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಒಂದೇ ಮರದಲ್ಲಿ ಗಂಡು ಮತ್ತು ದ್ವಿಲಿಂಗಿ ಹೂಗಳೆರಡೂ ಇರುವುವು. ಕಾಯಿ ಅಷ್ಟಿ ಫಲ (ಡ್ರೂಪ್) ಮಾದರಿಯದು. ಮಾವಿನ ವಿಭಿನ್ನ ಬಗೆಗಳಲ್ಲಿ ಕಾಯಿಯ ಗಾತ್ರ ಮತ್ತು ಆಕಾರಗಳು ಬೇರೆ ಬೇರೆಯಾಗಿರುವುವು. ಕಾಯಿಯ ಸಿಪ್ಪೆ ಮಂದ ಇಲ್ಲವೆ ತೆಳು. ಚರ್ಮಿಲವಾಗಿದೆ. ಕಾಯಿ ಎಳೆಯದಿರುವಾಗ ಹಸುರಾಗಿದ್ದು ಬಲಿತು ಮಾಗಿದಂತೆ ಹಳದಿ ಅಥವಾ ಕೆಂಪು ಬಣ್ಣವನ್ನು ತಳೆಯುತ್ತದೆ. ಸಿಪ್ಪೆಯಲ್ಲಿ ಗ್ರಂಥಿಗಳುಂಟು. ತಿರುಳು ತಿಳಿಹಳದಿ, ಹಳದಿ, ಕಿತ್ತಳೆ ಮುಂತಾದ ವಿಭಿನ್ನ ವರ್ಣದ್ದಾಗಿದ್ದು ಗಟ್ಟಿಯಾಗಿರಬಹುದು ಅಥವಾ ಮೃದು ಹಾಗೂ ರಸಭರಿತವಾಗಿರಬಹುದು. ಕೆಲವು ಬಗೆಗಳಲ್ಲಿ ಇದಕ್ಕೆ ಹುಳಿ ರುಚಿಯಿದ್ದರೆ ಇನ್ನು ಕೆಲವಲ್ಲಿ ಸಿಹಿಯಾಗಿ ಮಾಧುರ್ಯದಿಂದ ಕೂಡಿರುತ್ತದೆ. ಅಂತೆಯೇ ಕೆಲವು ತೆರನ ಮಾವುಗಳು ನಾರು ನಾರಾಗಿರುವುದೂ ಉಂಟು. ಒಳಗೆ ಒಂದೇ ಒಂದು ಅಂಡಾಕಾರದ ಬೀಜ ಇದೆ. ಇದರ ಸುತ್ತ ಪೆಡಸಾದ, ನಾರಿನಿಂದ ರಚಿತವಾದ ಕವಚ ಉಂಟು; ಇದೇ ಓಟೆ.

	ಮಾವಿನ ಬಗೆಗಳು : ಮಾವಿನಲ್ಲಿ ಬೀಜದಿಂದ ವೃದ್ಧಿಸಲಾಗುವ ಮತ್ತು ಕಸಿ ವಿಧಾನದಿಂದ ವೃದ್ಧಿಸಲಾಗುವ ಎಂದು ಎರಡು ಪ್ರಧಾನ ಗುಂಪುಗಳನ್ನು ಗುರುತಿಸಲಾಗಿದೆ. ಭಾರತದಲ್ಲಿ ಬೆಳೆಯಲಾಗುತ್ತಿರುವ ಮಾವಿನ ವಿವಿಧ ಬಗೆಗಳ ಪೈಕಿ ಮುಕ್ಕಾಲು ಪಾಲು ಮೊದಲನೆಯ ಗುಂಪಿಗೆ ಸೇರಿವೆಯಾದರೂ ಇವು ವಾಣಿಜ್ಯ ದೃಷ್ಟಿಯಿಂದ ಮುಖ್ಯವೆನಿಸಿಲ್ಲ. ಏಕೆಂದರೆ ಇವು ಪುಷ್ಕಳವಾಗಿ ಫಲ ಬಿಡುವುವಾದರೂ ಪ್ರತಿವರ್ಷ ಒಂದೇ ರೀತಿ ಫಲ ಕೊಡುವುವು ಎಂದು ಹೇಳುವಂತಿಲ್ಲ. ಇವುಗಳಲ್ಲಿ ಏಕಭ್ರೂಣೀಯ ಮತ್ತು ಬಹುಭ್ರೂಣೀಯ ಎಂಬ ಎರಡು ಬಗೆಗಳುಂಟು. ಭಾರತದ ಮಾವಿನ ಬಗೆಗಳ ಪೈಕಿ ಬಹುಪಾಲು ಮೊದಲನೆಯ ಗುಂಪಿನವು. ಕೇರಳದ ಕೆಲವಡೆಗಳಲ್ಲಿ ಮಾತ್ರ ಎರಡನೆಯ ಬಗೆಯ ಮಾವು ಕಂಡುಬರುತ್ತದೆ. ಉದಾಹರಣೆಗೆ ಓಲೂರು ಮತ್ತು ಚಂದ್ರಕರಣ. ಆಗ್ನೇಯ ಏಷ್ಯದ ಆದ್ರ್ರಕಾಡುಗಳಲ್ಲಿ ಬೆಳೆಯುವಂಥ ಹೆಚ್ಚಿನ ಪಾಲು ಮಾವುಗಳು ಬಹು ಭ್ರೂಣೀಯ ಗುಂಪಿನವಾಗಿವೆ. ಇಂಡೊಚೀನ ಪ್ರದೇಶದಲ್ಲಿ ಬೆಳೆಯುವ ಕಾಂಬೋಡಿಯಾನ, ಫಿಲಿಪೀನ್ಸ್‍ನಲ್ಲಿ ಬೆಳೆಯುವ ಕ್ಯಾರಬಾವೊ ಮತ್ತು ಪೈಕೊ ಬಗೆಗಳು ಈ ಗುಂಪಿನವು.

	ಒಂದು ಅಂದಾಜಿನ ಪ್ರಕಾರ ದೇಶದ ವಿವಿಧ ಭಾಗಗಳಲ್ಲಿ ಸುಮಾರು 1000ಕ್ಕೂ ಹೆಚ್ಚಿನ ಮಾವಿನ ಬಗೆಗಳು ಕಾಣದೊರೆಯುತ್ತವೆ. ಇವುಗಳಿಗೆ ಒಂದೊಂದಕ್ಕೂ ವಿಶಿಷ್ಟವಾದ ರುಚಿ, ಸ್ವಾದ, ತಿರುಳಿನ ರಚನೆ ಇವೆಯೆನ್ನಲಾಗಿದೆ. ಆದರೆ ಈ ತೆರನ ವರ್ಗೀಕರಣಕ್ಕೆ ವೈಜ್ಞಾನಿಕ ಆಧಾರಗಳಿಲ್ಲವಾದ್ದರಿಂದ ಕಾಯಿಗಳ ಗಾತ್ರ, ಆಕಾರ ಗುಣಮಟ್ಟ, ಮರದ ಬೆಳೆವಣಿಗೆ ಮುಂತಾದ ಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ಮಾವಿನ ಬೇರೆ ರೂಪಭೇದಗಳನ್ನು, ಬಗೆಗಳನ್ನು ಹೆಸರಿಸಲು ಪ್ರಯತ್ನ ನಡೆಸಲಾಗಿದೆ. ಇದರ ಫಲವಾಗಿ ಒಟ್ಟು 77 ಭಾರತೀಯ ಬಗೆಗಳನ್ನೂ 24 ವಿದೇಶೀ ಬಗೆಗಳನ್ನೂ ಗುರುತಿಸಲಾಗಿದೆ. ಇವುಗಳ ಪೈಕಿ ವಾಣಿಜ್ಯದೃಷ್ಟಿಯಿಂದ ಅತಿಮುಖ್ಯವೆನಿಸಿರುವ ಕೆಲವು ಬಗೆಗಳನ್ನೂ ಅವುಗಳ ಕೃಷಿಗೆ ಪ್ರಸಿದ್ಧವಾಗಿರುವ ರಾಜ್ಯಗಳನ್ನೂ ಹೆಸರಿಸಲಾಗಿದೆ: ಆಲಂಪುರ್ ಬನೆಷನ್ (ಆಂಧ್ರ ಪ್ರದೇಶ, ತಮಿಳುನಾಡು), ಆಲ್‍ಫೊನ್ಸೊ (ಬಾದಾಮಿ, ಆಪೂಸ್ ಇತ್ಯಾದಿ; ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರ), ಬ್ಯಾಂಗಲೂರ (ತೋತಾಪುರಿ, ಕಿಳಿಮುಕ್ಕು; ಆಂಧ್ರ, ತಮಿಳುನಾಡು, ಕರ್ನಾಟಕ), ಬಂಗನ ಪಲ್ಲೆ (ಆಂಧ್ರ), ದಸೆರಿ (ಉತ್ತರ ಪ್ರದೇಶ, ಪಂಜಾಬ್, ದೆಹಲಿ), ಗುಲಾಬ್ ಖಾಸ್ (ಬಿಹಾರ), ಲಂಗರಾ (ಉತ್ತರಪ್ರದೇಶ, ಬಿಹಾರ), ಮಲ್‍ಗೋವ (ಆಂಧ್ರ, ಮಹಾರಾಷ್ಟ್ರ, ಕರ್ನಾಟಕ), ನೀಲಮ್ (ತಮಿಳುನಾಡು, ಆಂಧ್ರ), ಓಲೂರು (ಕೇರಳ), ಪೈರಿ-ರಸಪೂರಿ (ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಕೇರಳ). ರುಮಾನಿ (ತಮಿಳುನಾಡಿನ ಪೂರ್ವ ಜಿಲ್ಲೆಗಳು), ರಾಜಾಪುರಿ (ಗುಜರಾತ್), ಸುವರ್ಣರೇಖ (ಆಂಧ್ರ), ವನರಾಜ (ಗುಜರಾತಿನ ವಡೋದರ ಭಾಗ), ಫಜ್ಲಿ (ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಬಿಹಾರ). ಜರ್ದಾಲು (ಬಿಹಾರ, ಉತ್ತರ ಪ್ರದೇಶ), ಸಫೇದ (ಲಕ್ನೊ, ಉತ್ತರ ಪ್ರದೇಶ).

	ಮಾವಿನ ಬೇಸಾಯ : ಮಾವು ಪ್ರಧಾನವಾಗಿ ಉಷ್ಣವಲಯದ ಬೆಳೆ. 80oಈ ಸರಾಸರಿ ಉಷ್ಣತೆ ಇರುವಂಥ ಹಾಗೂ ವರ್ಷದಲ್ಲಿ ಜೂನ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಮಾತ್ರ ಸು. 75-250 ಸೆಂಮೀ ಮಳೆ ಬೀಳುವಂಥ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೂ ಅರಳುವ ಸಮಯದಲ್ಲಿ ಮಳೆಗಾಳಿ, ಮಂಜು, ಮೋಡ ಮುಸುಕಿನ ವಾತಾವರಣ ಇರಬಾರದು. ಹಣ್ಣುಗಳು ಬಲಿತು ಮಾಗುವ ವೇಳೆಯಲ್ಲೂ ಮಳೆ ಬೀಳಬಾರದು. ಮಾವು ಕಡುಚಳಿಯನ್ನು ಸಹಿಸದು. ಆಳವಾದ ಮತ್ತು ನೀರು ಚೆನ್ನಾಗಿ ಬಸಿದು ಹೋಗುವಂಥ ಮಣ್ಣು ಇದರ ಬೆಳೆವಣಿಗೆಗೆ ಉತ್ತಮ, ಮೆಕ್ಕಲು ಮಣ್ಣು ಅತ್ಯುತ್ತಮ. ನೆಲ ಕ್ಷಾರೀಯವಾಗಿಯಾಗಲಿ ಶಿಲಾಮಯವಾಗಿಯಾಗಲಿ ಇರಬಾರದು.

	ಮಾವನ್ನು ಬೀಜಗಳ ಮುಖಾಂತರ ಸುಲಭವಾಗಿ ಬೆಳೆಸಬಹುದಾದರೂ ಹೀಗೆ ಬೆಳೆಸಲಾರದ ಮರಗಳು ಏಕರೀತಿಯ ಗುಣಮಟ್ಟದ ಫಲ ಕೊಡುವುದು ಖಚಿತ ಅಲ್ಲವಾದ್ದರಿಂದ, ಕಸಿಮಾಡಿ ಬೆಳೆಸುವುದೇ ವಾಡಿಕೆ.

	ಕಸಿಮಾಡಿದ ಮಾವಿನ ಸಸಿಗಳನ್ನು ಜುಲೈ-ಡಿಸೆಂಬರ್ ತಿಂಗಳುಗಳ ಅವಧಿಯಲ್ಲಿ ಬೇಕೆನಿಸಿದ ಕಡೆ 60-90 ಸೆಂ.ಮೀ ಆಳದ ಗುಂಡಿಗಳನ್ನು ತೋಡಿ ಕೊಟ್ಟಿಗೆ ಗೊಬ್ಬರ, ಬೂದಿ, ಮಣ್ಣು ಇವುಗಳ ಮಿಶ್ರಣವನ್ನು ಹಾಕಿ, ನೆಡಲಾಗುತ್ತದೆ. ಸಸಿಗಳ ನಡುವಣ ಅಂತರ ಅವುಗಳ ಬೆಳೆವಣಿಗೆಯ ತೀವ್ರತೆ, ಸ್ವಭಾವವನ್ನನುಸರಿಸಿ 10.5ರಿಂದ 18 ಮೀಟರಿನವರೆಗೆ ವ್ಯತ್ಯಾಸವಾಗುವುದು.

	ಸಸಿ ನೆಟ್ಟ ಮೊದಲ 3-4 ವರ್ಷಗಳ ಕಾಲ ಗಿಡಗಳಿಗೆ ನೀರು ಹಾಯಿಸುವುದು ಕ್ರಮ. ಅನಂತರ ಮಳೆ ಸರಿಯಾಗಿದ್ದರೆ ನೀರು ಹಾಕುವುದು ಅನಗತ್ಯ. ಅಂತೆಯೇ ಗಿಡಗಳು ಸಣ್ಣ ವಯಸ್ಸಿನವಾಗಿರುವಾಗ ಕೊಟ್ಟಿಗೆ ಗೊಬ್ಬರ, ಮೂಳೆ ಗೊಬ್ಬರ, ಬೂದಿ, ಹರಳು ಹಿಂಡಿ, ಅಮೋನಿಯಮ್ ಸಲ್ಫೇಟ್ ಮುಂತಾದವುಗಳ ಮಿಶ್ರಣವನ್ನು ಹಾಕಲಾಗುತ್ತದೆ. ಮರ ದೊಡ್ಡದಾದ ಮೇಲೆ ಗೊಬ್ಬರ ಹಾಕುವ ಕ್ರಮ ಇಲ್ಲ.

	ಕಡುಚಳಿಯಿಂದಲೂ ಬೇಸಗೆಯಲ್ಲಿ ಬಿಸಿಗಾಳಿಯಿಂದಲೂ ಮರಗಳಿಗೆ ಹಾನಿಯುಂಟಾಗುವುದರಿಂದ ಇದನ್ನು ತಡೆಯಲು ಮಾವಿನತೋಟದ ಸುತ್ತ ಹಿಪ್ಪು ನೇರಳೆ, ಬಿರಡಿ, ಗಾಳಿಮರ, ಹಾಲವಾಣ, ರಕ್ತಚಂದನ ಮುಂತಾದ ಮರಗಳನ್ನು ಬೆಳೆಸುವುದಿದೆ.

	ಮಾವಿನಮರ ವರ್ಷಕ್ಕೊಮ್ಮೆ, ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ಹೂಬಿಡುತ್ತದೆ. ಚಳಿ ಹೆಚ್ಚಾಗಿರುವಂಥ ಉತ್ತರ ಭಾರತದಲ್ಲಿ ಹೂ ಅರಳುವ ಶ್ರಾಯ ಫೆಬ್ರುವರಿ-ಮಾರ್ಚ್. ಸುಮಾರು 6-8 ವಾರ ಮರದಲ್ಲಿ ಹೂ ಅರಳಿರುವುವು. ಕಾಯಿ ಕಚ್ಚಿ, ಹಣ್ಣು ಪಕ್ವಸ್ಥಿತಿಗೆ ಬರಲು ಸುಮಾರು 4-5 ತಿಂಗಳು ಕಾಲ ಹಿಡಿಯುವುದು.

	ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಾವಿನ ಮರಗಳು ಪ್ರತಿವರ್ಷ ಹೂ ಬಿಡುವುವಾದರೂ ವಯಸ್ಸಾದ ಮರಗಳು ವರ್ಷ ಬಿಟ್ಟು ವರ್ಷ ಹೂ ಅರಳಿಸಿ ಫಲ ಕೊಡುವುವು. ಇದಕ್ಕೆ ಕಾರಣ ಹಲವಾರು : ಹವೆ, ನೆಲದಲ್ಲಿಯ ಆದ್ರ್ರತೆ, ರೋಗರುಜಿನಗಳು ಇತ್ಯಾದಿ. ಹೂಗೊಂಚಲಿನ ಎಲ್ಲ ಹೂಗಳೂ ಕಾಯಿಕಚ್ಚವು. ಕಾಯಿಯಾಗುವ ಹೂಗಳ ಸಂಖ್ಯೆ ವಿವಿಧ ಬಗೆಗಳಲ್ಲಿ ಬೇರೆ ಬೇರೆಯಾಗಿವೆ.

	ಮಾವಿನಮರಕ್ಕೆ ಹಲವಾರು ರೀತಿಯ ರೋಗಗಳು, ಕೀಟ ಪಿಡುಗುಗಳು ಹಾನಿ ಎಸಗುವುದುಂಟು. ಬೂಷ್ಟು ರೋಗಗಳ ಪೈಕಿ ಪೌಡರಿ ಮಿಲ್‍ಡ್ಯೂ, ಆಂತ್ರಕ್ನೋಸ್ ಮತ್ತು ಹೂಮಂಜರಿಯ ಕುಚ್ಚುಗಟ್ಟುವಿಕೆ ಮುಖ್ಯವೆನಿಸಿವೆ. ಮೊದಲ ರೀತಿಯ ರೋಗ ಹೂ ಮತ್ತು ಕಾಯಿಗಳಿಗೆ ಅಂಟುವ ಜಾಡ್ಯ. ಗಂಧಕವನ್ನು ಸಿಂಪಡಿಸುವುದರ ಮೂಲಕ ಇದನ್ನು ತಡೆಗಟ್ಟಬಹುದು.

	ಆಂತ್ರಕ್ನೋಸ್ ರೋಗದ ಲಕ್ಷಣ ಎಂದರೆ ಎಳೆಯಕುಡಿಗಳು, ಎಲೆ ಹಾಗೂ ಹೂಗಳ ಮೇಲೆ ಕಪ್ಪುಚುಕ್ಕೆಗಳು ಕಾಣಿಸಿಕೊಳ್ಳುವುದು. ಕಾಯಿ ಎಳೆಯವಾಗಿದ್ದರೆ ಬಿದ್ದುಹೋಗುವುವು. ಬಲಿತ ಅಥವಾ ಮಾಗಿದ ಹಣ್ಣುಗಳಾದರೆ ಸಿಪ್ಪೆಯ ಮೇಲೆ ಕಪ್ಪುಚುಕ್ಕೆಗಳು ಮೂಡುವುದಲ್ಲದೆ ಒಳಗಿನ ತಿರುಳು ಗಡುಸಾಗುತ್ತದೆ. ಬೋರ್ಡೊ ಮಿಶ್ರಣದ ಸಿಂಪಡಿಕೆಯಿಂದ ರೋಗವನ್ನು ನಿಯಂತ್ರಿಸಬಹುದು.

	ಕುಚ್ಚು ರೋಗದ ಕಾರಣ ಖಚಿತವಾಗಿ ತಿಳಿದಿಲ್ಲ. ರೋಗಪೀಡಿತ ಹೂ ಮಂಜರಿಗಳನ್ನು ಕತ್ತರಿಸಿ ಸುಟ್ಟು ಹಾಕುವುದೇ ಈ ರೋಗವನ್ನು ಹತೋಟಿಯಲ್ಲಿಡುವ ಮಾರ್ಗ.

	ಜಾಸಿಡ್ ಜಿಗಿಕೀಟ, ಕಾಂಡ ಕೊರಕ, ಸೊಂಡಿಲು ಕೀಟ, ಶಲ್ಕ ಕೀಟ, ಮಕಮಲ್ ತಿಗಣೆ, ಕೆಂಪಿರುವೆ ಮುಂತಾದವು ಮಾವಿನಮರಕ್ಕೆ ಹಾನಿಯುಂಟು ಮಾಡುವ ಕೀಟಗಳ ಪೈಕಿ ಕೆಲವು, ಡಿಡಿಟಿ, ಬಿಎಚ್‍ಸಿ, ಫಾಲಿಡಾಲ್, ಗೆಸರೋಲ್ ಮುಂತಾದ ಕೀಟನಾಶಕಗಳ ಬಳಕೆಯಿಂದ ಕೀಟಗಳನ್ನು ನಿಯಂತ್ರಿಸಬಹುದು.

	ಮಾವಿನ ಇಳುವರಿ : ಕಸಿ ಮಾವಿನ ಮರಗಳು 4ನೆಯ ವರ್ಷದಿಂದ ಫಲಕೊಡಲು ಪ್ರಾರಂಭಿಸುವುವು. ಮೊದಮೊದಲು ಇಳುವರಿ ತುಂಬ ಕಡಿಮೆ. ಕಾಯಿಗಳ ಸಂಖ್ಯೆ ಮೊದಲು ಮರಕ್ಕೆ 10-15 ಇರುತ್ತಿದ್ದು 6ನೆಯ ವರ್ಷಕ್ಕೆ 50-75 ಆಗಿ 16ನೆಯ ವರ್ಷಕ್ಕೆ  300-500ಕ್ಕೇರುತ್ತದೆ. 20ರಿಂದ 40 ವರ್ಷ ವಯಸ್ಸಿನ ಮರಗಳು ತಲಾ 1000-3000 ಹಣ್ಣುಗಳನ್ನು ಕೊಡುವುದುಂಟು. ಲಂಗರಾ, ದಸೆರಿ, ರಸಪೂರಿ, ನೀಲಮ್, ತೋತಾಪುರಿ (ಬ್ಯಾಂಗಲೂರ), ಸುವರ್ಣರೇಖ ಮುಂತಾದ ಬಗೆಗಳು ಅಧಿಕ ಇಳುವರಿ ಕೊಡುವವೆಂದು ಹೆಸರಾಗಿದ್ದರೆ (800-3000 ಹಣ್ಣುಗಳು), ಜಹಾಂಗೀರ್ ಬಗೆ ಕೇವಲ 200-250 ಹಣ್ಣುಗಳನ್ನು ಮಾತ್ರ ಕೊಡುತ್ತದೆ.

	ಮಾವಿನಹಣ್ಣಿನ ಸುಗ್ಗಿ ದಕ್ಷಿಣ ಭಾರತದಲ್ಲಿ ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಮೇ ವೇಳೆಗೆ ಮುಗಿಯುತ್ತದಾದರೆ ಉತ್ತರ ಭಾರತದಲ್ಲಿ ಜೂನ್ ಸಮಯಕ್ಕೆ ಆರಂಭವಾಗಿ ಆಗಸ್ಟ್ ಕೊನೆಯ ತನಕ ಇರುತ್ತದೆ.

	ಕಾಯಿಗಳು ಪೂರ್ಣ ಬಲಿತಾಗ ಆದರೆ ಇನ್ನೂ ಹಸುರಾಗಿರುವಾಗ ಕೊಯ್ಲು ಆರಂಭವಾಗುತ್ತದೆ. ಚೆನ್ನಾಗಿ ಬಲಿತ ಕಾಯಿಗಳನ್ನು ಸಂಗ್ರಹ ಕೋಣೆಗಳಲ್ಲಿ ಬತ್ತದ ಒಣಹುಲ್ಲು ಇಲ್ಲವೆ ಗೋದಿ ತೌಡಿನ ಹಾಸಿನ ಮೇಲಿರಿಸಿ ಒಂದು ವಾರ ಕಾಲ ಇರಿಸಿ ಮಾಗಲು ಬಿಡಲಾಗುತ್ತದೆ. ಬಿದಿರಿನ ಬುಟ್ಟಿಗಳಲ್ಲಿ ಇಲ್ಲವೆ ಮರದ ಪೆಟ್ಟೆಗೆಗಳಲ್ಲಿ ಹಣ್ಣುಗಳನ್ನು ಇರಿಸಿ ಮಾರುಕಟ್ಟೆಗೆ ಕಳಿಸಲಾಗುತ್ತದೆ.

	ಮಾವಿನಹಣ್ಣಿನ ರಾಸಾಯನಿಕ ರಚನೆ ಮತ್ತು ಉಪಯೋಗಗಳು : ಬಲಿತಿರುವ ಆದರೆ ಇನ್ನೂ ಹಸುರಾಗಿರುವ ಮಾವಿನಕಾಯಿಯಲ್ಲಿ ಈ ಮುಂದಿನ ಪೋಷಕಾಂಶಗಳು ಕಾಣದೊರೆಯುತ್ತವೆ. ಪ್ರತಿ 100 ಗ್ರಾಮ್ ಕಾಯಿಗೆ ನೀರಿನ ಅಂಶ 90.0; ಪ್ರೋಟೀನ್ 0.7; ಕೊಬ್ಬು 0.1; ಕಾರ್ಬೊ ಹೈಡ್ರೇಟುಗಳು 8.8; ಖನಿಜಾಂಶ 0.4; ಕ್ಯಾಲ್ಸಿಯಮ್ 0.01; ರಂಜಕ 0.02. ಜೊತೆಗೆ ಕಬ್ಬಿಣ ಪ್ರತಿ 100ಗ್ರಾಮಿಗೆ 4.5 ಮಿಗ್ರಾಂ; ವಿಟಮಿನ್ ಂ 150IU ; ರೈಬೊಫ್ಲೇವಿನ್ 30 ಮಿಗ್ರಾಂ ; ಆಸ್ಕಾರ್ಬಿಕ್ ಆಮ್ಲ 3 ಮಿಗ್ರಾಂ. ಮಾಗಿದಹಣ್ಣಿನಲ್ಲಿ 86.1 ನೀರಿನ ಅಂಶ ; 0.6 ಪ್ರೋಟೀನ್ ; 0.01 ಕ್ಯಾಲ್ಸಿಯಮ್ ; 0.2 ರಂಜಕ, ಕಬ್ಬಿಣ 0.3 ಮಿಗ್ರಾಂ : ವಿಟಮಿನ್ ಂ 4800IU, ನಿಕೊಟಿನಿಕ್ ಆಮ್ಲ 0.3 ಮಿಗ್ರಾಂ, ರೈಬೊಫ್ಲೇವಿನ್ 50 ಮಿಗ್ರಾಂ ಮತ್ತು ಆಸ್ಕಾರ್ಬಿಕ್ ಆಮ್ಲ 13 ಮಿಗ್ರಾಂ ಇವೆ.

	ಮಾಗಿದ ಹಣ್ಣಿನಲ್ಲಿ ಇರುವ ಮುಖ್ಯ ಸಕ್ಕರೆಗಳೆಂದರೆ ಸ್ಯೂಕ್ರೋಸ್, ಗ್ಲೂಕೋಸ್ ಮತ್ತು ಫ್ರಕ್ಟೋಸ್, ಇನ್ನೂ ಕಾಯಿ ಹಂತದಲ್ಲಿರುವಾಗ ಸಿಟ್ರಿಕ್, ಮ್ಯಾಲಿಕ್, ಆಕ್ಸಾಲಿಕ್, ಸಕ್ಸಿನಿಕ್ ಆಮ್ಲಗಳೂ ಗುರುತಿಸಲಾಗದ ಇನ್ನೆರಡು ಆಮ್ಲಗಳೂ ಇರುವುವು. ಮಾಗುತ್ತ ಬಂದಂತೆ ಆಮ್ಲತೆ ಕಡಿಮೆಯಾಗಿ ಸಕ್ಕರೆ ಅಂಶ ಹೆಚ್ಚಾಗುತ್ತ ಹೋಗುತ್ತದೆ.

	ಮಾವಿನಹಣ್ಣು ಉಷ್ಣವಲಯ ದೇಶಗಳಲ್ಲೆಲ್ಲ ಅತ್ಯಂತ ಜನಪ್ರಿಯ ಹಾಗೂ ಮೆಚ್ಚುಗೆಯ ಹಣ್ಣು ಎನಿಸಿದೆ. ಎಳೆಯ ಮತ್ತು ಮಾಗದ ಕಾಯಿಗಳನ್ನು ಉಪ್ಪಿನಕಾಯಿ, ಚಟ್ನಿ ಮುಂತಾದ ರೂಪಗಳಲ್ಲಿ ಮತ್ತು ವಿವಿಧ ತಿನಿಸುಗಳ ಜೊತೆಯಲ್ಲಿ ಬಳಸಲಾಗುತ್ತದೆ. ಮಾಗಿದ ಹಣ್ಣುಗಳನ್ನು ತಾಜಾ ಆಗಿ ತಿನ್ನುವುದಲ್ಲದೆ, ರಸ, ಪಾನೀಯ, ಜಾಮ್, ಜೆಲ್ಲಿ, ಮುರಬ್ಬ, ಮಾವಿನಹಪ್ಪಳ (ಆಮ್ ಪಾಪಡ್) ಇತ್ಯಾದಿ ರೂಪಗಳಲ್ಲಿ ಸೇವಿಸಲಾಗುತ್ತದೆ.

	ಜಾವ, ಫಿಲಿಪೀನ್ಸ್ ದೇಶಗಳಲ್ಲಿ ಮಾವಿನ ಎಳೆಯ ಚಿಗುರನ್ನು ತರಕಾರಿಯಾಗಿ ಉಪಯೋಗಿಸುವುದಿದೆ. ಎಲೆತೊಪ್ಪಲು ದನಗಳಿಗೆ ಮೇವು ಕೂಡ. ಎಲೆಗಳನ್ನು ಸುಟ್ಟು ಪಡೆಯುವ ಬೂದಿಯನ್ನು ಸುಟ್ಟಗಾಯ ವಾಸಿಮಾಡಲು ಬಳಸುವುದುಂಟು. ಒಳಗಿಸಿದ ಮಾವಿನ ಹೂಗಳು ಅತಿಸಾರ, ಆಮಶಂಕೆಗಳಿಗೆ ಒಳ್ಳೆಯ ಮದ್ದು ಎನಿಸಿವೆ. ಮಾವಿನ ತೊಗಟೆಯಲ್ಲಿ ಟ್ಯಾನಿನ್ ಇದೆಯಾಗಿ ಚರ್ಮಹದಗೊಳಿಸಲೂ ಪ್ರತಿಬಂಧಕವಾಗಿಯೂ ಇದು ಬಳಕೆಯಾಗುತ್ತದೆ. ತೊಗಟೆಯಿಂದ ಪಡೆಯುವ ರಂಗನ್ನು ಹತ್ತಿ, ರೇಷ್ಮೆ ಮತ್ತು ಉಣ್ಣೆ ಬಟ್ಟೆಗಳಿಗೆ ತಿಳಿಹಳದಿ ಬಣ್ಣ ಕೊಡಲು ಉಪಯೋಗಿಸುವರು. ಮಾವಿನಮರದಿಂದ ಸಾಕಷ್ಟು ಒಳ್ಳೆಯ ಗೋಂದು ಲಭಿಸುತ್ತದೆ.

	ಮಾವಿನಮರದ ಚೌಬೀನೆ ಸಾಕಷ್ಟು ದೃಢವಾದುದು ಗಟ್ಟಿಯಾದುದೂ ಆಗಿರುವುದರಿಂದ ಹಲವಾರು ತೆರನ ಮರಗೆಲಸಗಳಿಗೆ ಒದಗುತ್ತದೆ.

	ಭಾರತದ ಮಾವಿನ ಇಳುವರಿಯಲ್ಲಿ ಬಹುಪಾಲು ಸ್ಥಳೀಯವಾಗಿ ಬಳಕೆಯಾಗುತ್ತದಾದರೂ ಕೊಂಚಪಾಲು ಕುವೈತ್, ಬಹ್ರೇನ್, ಸೌದಿ ಅರೇಬಿಯ, ಸಿಂಗಪುರ, ಬ್ರಿಟನ್ ಮುಂತಾದೆಡೆಗಳಿಗೆ ರಫ್ತಾಗುತ್ತದೆ.             
  (ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ